ಮ್ಯಾನಿಟೋಬ
ಕೆನಡದ ಒಂದು ಪ್ರಾಂತ್ಯ. ಇದರ ಉತ್ತರಕ್ಕೆ ಕೀವೆಟನ್ ಜಿಲ್ಲೆ. ಈಶಾನ್ಯಕ್ಕೆ ಹಡ್ಸನ್ ಕೊಲ್ಲಿ. ಪೂರ್ವಕ್ಕೆ ಅಂಟಿರೀಯೊ. ದಕ್ಷಿಣಕ್ಕೆ ಅಮೆರಿಕ ಸಂಯುಕ್ತ ಸಂಸ್ಥಾನಗಳ ಮಿನಿಸೋಟ ಮಾಗೂ ಉತ್ತರ ಡಕೋಟ ಮತ್ತು ಪಶ್ಚಿಮಕ್ಕೆ ಸಸ್ಕಾಚ್‍ವಾನ್ ರಾಜ್ಯ ಸುತ್ತುವರಿದಿವೆ. ಜಲಾವೃತ ಪ್ರದೇಶಗಳೂ ಸೇರಿದಂತೆ ಇದರ ವಿಸ್ತೀರ್ಣ 6.50.087 ಚ.ಕಿ.ಮೀ. ಜನಸಂಖ್ಯೆ 10.82.800 (1987 ಏಪ್ರಿಲ್). ರಾಜಧಾನಿ ವಿನ್‍ಪೆಗ್. ಇದರ ಜನಸಂಖ್ಯೆ 6,25,304 (ಜೂನ್ 1986).

ಭೂಲಕ್ಷಣ : ಮ್ಯಾನಿಟೋಬದ ದಕ್ಷಿಣ ತುದಿಯಭಾಗ ಸಮತಲದ ಹುಲ್ಲುಗಾವಲುಗಳಿಂದ ಕೂಡಿದೆ. ಉತ್ತರದ ತಗ್ಗುಪ್ರದೇಶ ಹಿಮಯುಗದ ಅಗಾಸೀ ಸರೋವರದ ಭಾಗವಾಗಿದ್ದು ಇದರಲ್ಲಿ ವಿನ್‍ಪೆಗ್, ವಿನ್‍ಪೆಗೋಸಿಸ್ ಮತ್ತು ಮ್ಯಾನಿಟೋಬ ಸರೋವರಗಳು ಸೇರಿವೆ. ಮ್ಯಾನಿಟೋಬ ಸರೋವರ ಈ ಪ್ರಾಂತ್ಯದ ರೆಡ್‍ನದಿಯ ತಗ್ಗು ಪ್ರದೇಶದಲ್ಲಿರುವ ಸರೋವರ. 1738 ರಲ್ಲಿ ಪಿರ್ರೆ ಡಿ ಲಾವೆರೆಂಡ್ರೆ ಇದನ್ನು ಶೋಧಿಸಿದ. ಈ ಸರೋವರ 4,705.84 ಚ.ಕಿ.ಮೀ ವಿಸ್ತೀರ್ಣವಿದೆ. ಇದರ ದಕ್ಷಿಣ ತುದಿ ವಿನ್‍ಪೆಗ್‍ನಿಂದ ವಾಯುವ್ಯದಲ್ಲಿ 128.80 ಕಿ.ಮೀ ದೂರದಲ್ಲಿದೆ. ವಿನ್‍ಪೆಗೋಸಿಸ್ ಸರೋವರದಿಂದ ಇಕ್ಕಟ್ಟಾದ ಭೂಸಂಧಿ ಇದನ್ನು ಪ್ರತ್ಯೇಕಿಸಿದೆ. ಇದು ಮೀನುಗಾರಿಕೆಯ ಪ್ರಮುಖ ಕೇಂದ್ರ. ಸುತ್ತ ಮುತ್ತ ಸಣ್ಣ ವಸಾಹತುಗಳು ಹಾಗೂ ಪ್ರವಾಸ ಸ್ಥಳಗಳು ಹಬ್ಬಿವೆ. ಮ್ಯಾನಿಟೋಬದಲ್ಲಿ 38,000 ಕ್ಕೂ ಹೆಚ್ಚು ಸರೋವರಗಳಿದ್ದು ಇಲ್ಲಿಯ ವಿನ್‍ಪೆಗ್ ಸರೋವರ ಪ್ರಪಂಚದಲ್ಲಿಯೇ 13 ನೆಯ ದೊಡ್ಡ ಸರೋವರ. ರೆಡ್ ಹಾಗೂ ಅಸಿನಬಾಯ್ನ್ ನದಿಗಳು ವಿನ್‍ಪೆಗ್ ಸರೋವವನ್ನು ಸೇರುವ ಪ್ರದೇಶಗಳು. ಎತ್ತರದ ಪ್ರಸ್ಥಭೂಮಿಗಳಿಂದ, ಕಾಡಿನಿಂದ ನದೀಕಣಿವೆಗಳಿಂದ, ಸುಣ್ಣ ಕಲ್ಲಿನ ಸ್ತರಗಳಿಂದ, ಜಾಡುಗಳು ಹಾಗೂ ಜೌಗು ಪ್ರದೇಶಗಳಿಂದ ಕೂಡಿವೆ. ಇಲ್ಲಿಂದ ಉತ್ತರಕ್ಕೆ ಹಾಗೂ ತಗ್ಗುಪ್ರದೇಶದ ಪೂರ್ವಕ್ಕೆ ಭೂವಿe್ಞÁನದ ಪ್ರಕಾರ ಕೇಂಬ್ರಿಯನ್ ಅಥವಾ ಪ್ರಿಕೇಂಬ್ರಿಯನ್ ಕವಚವಿದ್ದು ಬಂಡೆಗಳಿಂದಲೂ ಕಾಡುಗಳಿಂದಲೂ ನದಿಗಳಿಂದಲೂ ಕೂಡಿದೆ. ಪ್ರಾಂತ್ಯದ 3/4 ರಷ್ಟು ಭಾಗವನ್ನು ಆವರಿಸಿರುವ ಈ ಪ್ರದೇಶದಲ್ಲಿ ನೆಲ್ಸನ್ ಹಾಗೂ ಚರ್ಚಿಲ್ ನದಿಗಳು ಹರಿದು ಹಡ್ಸನ್ ಕೊಲ್ಲಿಯನ್ನು ಸೇರುತ್ತವೆ. ಹಡ್ಸನ್ ಕೊಲ್ಲಿಯ ತಗ್ಗುಪ್ರದೇಶ ಒಳನಾಡಿನಲ್ಲಿ 161 ಕಿಮೀ ಗಳಷ್ಟು ದೂರ ಹಬ್ಬಿದ್ದು ಸಮತಲದ ಹುಲ್ಲುಗಾವಲಿನಿಂದ ಕೂಡಿದೆ. ಶೇಕಡಾ 50 ಕ್ಕಿಂತ ಹೆಚ್ಚು ಭೂಪ್ರದೇಶ ಅರಣ್ಯಾವೃತ. ಮ್ಯಾನಿಟೋಬದ ಎತ್ತರದ ಪ್ರದೇಶ ಸಸ್ಕಾಚ್‍ವಾನ್ ಗಡಿಭಾಗದಲ್ಲಿದ್ದು ಇಲ್ಲಿ ರೈಡಿಂಗ್, ಡಕ್ ಮತ್ತು ಪಾಕ್ರ್ಯಪಿನ್ ಪರ್ವತಗಳಿವೆ. ಅತ್ಯಂತ ಎತ್ತರವಾದ ಶಿಖರ ಬಾಲ್ಡೀ (831ಮೀ).

ಹವಾಗುಣ : ಮ್ಯಾನಿಟೋಬದಲ್ಲಿ ಸಾಧಾರಣ ಒಣ ಹವೆಯಿದ್ದು ಉಷ್ಣತೆ ಋತುಗಳಿಗನುಸಾರವಾಗಿ ಬದಲಾವಣೆ ಹೊಂದುತ್ತವೆ. ಚಳಿಗಾಲದಲ್ಲಿ-400 ಅ ಹಾಗೂ ಬೇಸಗೆಯಲ್ಲಿ 380 ಅ ಉಷ್ಣತೆ ಇರುತ್ತದೆ. ಸರಾಸರಿ ಉಷ್ಣತೆ ವಿನ್‍ಪೆಗ್‍ನಲ್ಲಿ ಜನವರಿಯಲ್ಲಿ-12.90 ಅ ಹಾಗೂ ಜುಲೈನಲ್ಲಿ 13.80 ಅ ನಿಂದ 26.50 ಅ ಇರುತ್ತದೆ. ವಾರ್ಷಿಕ ಅವಪಾತದ ಪ್ರಮಾಣ ಸುಮಾರು 30.30 ಸೆಂಮೀಗಳಿಂದ ಸುಮಾರು 60 ಸೆಂ.ಮೀ.ವರೆಗೆ ಇರುತ್ತದೆ. ಇದರಲ್ಲಿ ಶೇಕಡಾ 70 ರಷ್ಟು ಭಾಗ ಮೇನಿಂದ ಅಕ್ಟೋಬರ್ ತನಕ ಬೀಳುತ್ತದೆ.

ಸಸ್ಯ ಹಾಗೂ ಪ್ರಾಣಿಸಂಪತ್ತು : ಮ್ಯಾನಿಟೋಬದಲ್ಲಿ 3,10,788 ಚ.ಕಿ.ಮೀಗೂ ಹೆಚ್ಚು ಅರಣ್ಯವಿದ್ದು ಇಲ್ಲಿ ಸ್ಪ್ರೂಸ್, ಅಸ್ಪೆನ್, ಜಾಕ್‍ಪೈನ್ ಪಾಪ್ಲರ್, ಬಾಲ್ಸಮ್, ಐಟ್‍ಬರ್ಚ್ ಹಾಗೂ ಟ್ಯಾಮರಾಕ್ ಮರಗಳಿವೆ. ದಕ್ಷಿಣದಲ್ಲಿ ಹುಲ್ಲುಗಾವಲುಗಳಿದ್ದು ಮರಗಳು ಕಡಿಮೆ.

ಪ್ರಾಂತ್ಯದ ಉತ್ತರಭಾಗದ ಕಾಡುಗಳಲ್ಲಿ ಕ್ಯಾರಿಬೊ, ಮೂಸ್ ಎಂಬ ಕಡವೆ ಜಾತಿಗೆ ಸೇರಿದ ಪ್ರಾಣಿ, ಎಲ್ಕ್, ಕರಡಿ, ಬೀವರ್, ನರಿ, ಲಿಂಕ್ಸ್, ಮಾರ್ಟೆನ್ ಮತ್ತು ಮಿಂಕ್ ಪ್ರಾಣಿಗಳನ್ನು ಕಾಣಬಹುದು. ದಕ್ಷಿಣದ ಭಾಗಗಳಲ್ಲಿ ಜಿಂಕೆ, ಕೊಯೊಟ್ನೆ ಮೊಲ, ಕಸ್ತೂರಿ ಇಲಿ ಇವೆ. ಹಡ್ಸನ್ ಕೊಲ್ಲಿಯ ಸುತ್ತಮುತ್ತ ಹಿಮಕರಡಿಗಳು ವಾಸಿಸುತ್ತವೆ. ಎತ್ತರದ ಪ್ರದೇಶಗಳಲ್ಲಿ ಗ್ರೌಸ್, ಕೋಳಿ ಮುಂತಾದವು ಇವೆ. ಮ್ಯಾನಿಡೋಬದ ಜೌಗುಪ್ರದೇಶ ಹಾಗೂ ಸರೋವರಗಲಲ್ಲಿ ಬಾತುಕೋಳಿಗಳು ಮತ್ತು ಮೀನುಗಳು ಹೇರಳವಾಗಿವೆ. ವಿನ್‍ಪೆಗ್ ಗೋಲ್ಡ್‍ಐ ಎಂಬ ಬಿಳಿಮೀನು ಪ್ರಪಂಚದಲ್ಲೇ ಪ್ರಸಿದ್ಧವಾಗಿವೆ. ಹಡ್ಸನ್‍ಕೊಲ್ಲಿಯಲ್ಲಿ ಬೆಲೂಗ ತಿಮಿಂಗಿಲಗಳು ಸಿಗುತ್ತವೆ.

ಅರಣ್ಯ ಹಾಗೂ ಪ್ರಾಣಿ ಸಂಪತ್ತನ್ನು ರಕ್ಷಿಸಲು ಪ್ರಾಂತ್ಯದ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ಆಸ್ಥೆವಹಿಸಿವೆ. ಮ್ಯಾನಿಟೋಬದಲ್ಲಿ ಸಿಗುವ ಒಳನಾಡಿನ ಮೀನುಗಳ ಸಂಖ್ಯೆ ಪ್ರಪಂಚದಲ್ಲೇ ಎರಡನೆಯ ಸ್ಥಾನ ಪಡೆದಿವೆ. ಕೆಲವು ಸರೋವರಗಳಲ್ಲಿ ಸಿಗುವ ಮೀನುಗಳ ಪೈಕಿ ಪಾದರಸದ ಅಂಶ ಕಂಡುಬಂದದ್ದರಿಂದ 1970 ರಲ್ಲಿ ಮೀನುಗಾರಿಕೆಯನ್ನು ನಿಲ್ಲಿಸಬೇಕಾಯಿತು. ಈ ಜಲಮಾಲಿನ್ಯಕ್ಕೆ ಕಾರಣವಾದ ಕೈಗಾರಿಕಾ ಸಂಸ್ಥೆಗಳ ಮೇಲೆ ಸರ್ಕಾರ ಕ್ರಮತೆಗೆದುಕೊಂಡಿದೆ.
ಜನಜೀವನ : ಮ್ಯಾನಿಟೋಬದ 3/4 ರಷ್ಟು ಜನ ನಗರವಾಸಿಗಳಾಗಿದ್ದರೂ ಪ್ರಾಂತ್ಯ ತನ್ನ ಗ್ರಾಮಜೀವನದ ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡಿದೆ. ವಿನ್‍ಪೆಗ್ ಕೆನಡದ ನಾಲ್ಕನೆಯ ಅತಿದೊಡ್ಡ ನಗರವಾಗಿದ್ದು ಪ್ರಾಂತ್ಯದ ಅರ್ಧದಷ್ಟು ಜನ ಇಲ್ಲಿ ವಾಸಿಸುತ್ತಾರೆ. ವಿನ್‍ಪೆಗ್ ಕೆನಡದ ಪ್ರಮುಖ ಸಾಂಸ್ಕøತಿಕ ಹಾಗೂ ಕಲೆಗಳ ಕೇಂದ್ರವಾಗಿದೆ. ವಿನ್‍ಪೆಗ್, ಬ್ರಾನ್‍ಡನ್, ಥಾಂಪ್‍ಸನ್ ಪೋರ್ಟೇಜ್ ಲಾ ಪಿರ್ರೀ, ಸೆಲ್ ಕರ್ಕ್ ಇವು ಈ ಪ್ರಾಂತ್ಯದ ಮುಖ್ಯ ನಗರಗಳು. ದಕ್ಷಿಣ ಭಾಗದಲ್ಲಿ ನಗರವಾಸಿಗಳ ಸಂಖ್ಯೆ ಹೆಚ್ಚು. ಗ್ರಾಮೀಣ ಪ್ರದೇಶದಲ್ಲಿ ಜಮೀನು ಹಿಡುವಳಿ ಸರಾಸರಿ 200 ಹೆಕ್ಟೇರ್ ವಿಸ್ತೀರ್ಣವಿದ್ದು ಯಾಂತ್ರಿಕ ಸೌಲಭ್ಯಗಳಿಂದ ಕೂಡಿವೆ.

1812 ರಲ್ಲಿ ಇಲ್ಲಿಗೆ ವಲಸೆಬಂದ ಸ್ಕಾಟಿಷ್ ಹಾಗೂ ಐರಿಷ್ ಜನರೆಡ್ ನದೀ ವಸಾಹತಿನಲ್ಲಿ ಕೃಷಿ ಪ್ರಾರಂಭಿಸಿದರು. 1870 ರಿಂದ 1900 ರ ನಡುವೆ ರೈಲು ಹಾಗೂ ರಸ್ತೆ ಸಾರಿಗೆ ಸೌಲಭ್ಯಗಳ ಕಾರಣದಿಂದ ಮ್ಯಾನಿಟೋಬದ ಜನಸಂಖ್ಯೆ ಹತ್ತರಷ್ಟು ಹೆಚ್ಚಾಯಿತು. ಇಲ್ಲಿಗೆ ಯುರೋಪ್ ಹಾಗೂ ಪೂರ್ವ ಕೆನಡದಿಂದ ಜನರು ವಲಸೆಬಂದರು. 1930 ನೆಯ ದಶಕದ ಮುಗ್ಗಟ್ಟು ಹಾಗೂ ಎರಡನೆಯ ಮಹಾಯುದ್ಧದ ಕಾರಣಗಳಿಂದ ಜನಸಂಖ್ಯ ಇಳಿಮುಖವಾಗಿ, ಯುದ್ಧಾನಂತರ ಮತ್ತೆ ಜನಸಂಖ್ಯೆ ಏರಲು ಪ್ರಾರಂಭವಾಯಿತು. 

ಬ್ರಿಟಿಷ್ ಮೂಲದ ಜನರು ಮ್ಯಾನಿಟೋಬದ ಎಲ್ಲ ಕಡೆಯೂ ಇದ್ದಾರೆ. ಫ್ರೆಂಚ್ ಮೂಲದವರನ್ನು ರೆಡ್ ನದಿಯ ಉದ್ದಕ್ಕೂ ಹಾಗೂ ಅಮೆರಿಕ ಸಂಯುಕ್ತಸಂಸ್ಥಾನಗಳ ಗಡಿಯಿಂದ ವಿನ್‍ಪೆಗ್‍ವರೆಗೂ ಕಾಣಬಹುದು. ಕ್ವಿಬೆಕ್ ಪ್ರಾಂತ್ಯವನ್ನು ಬಿಟ್ಟರೆ ಸೇಂಟ್ ಬೋನಿಫೆಸ್‍ನಲ್ಲಿಯ ಫ್ರೆಂಚರ ಸಂಖ್ಯೆ ಇಡೀ ಕೆನಡದಲ್ಲಿಯೇ ಅತಿಹೆಚ್ಚು ಜರ್ಮನರು ಮ್ಯಾನಿಟೋಬದ ದಕ್ಷಿಣ ಮಧ್ಯಬಾಗದಲ್ಲಿ ನೆಲೆಸಿದರೆ ಮ್ಯಾನಿಟೋಬದಲ್ಲಿ 40,000ಕ್ಕೂ ಹೆಚ್ಚು ಇಂಡಿಯನ್ನರು ಹಾಗೂ ಎಸ್ಕಿಮೋಗಳು ಇದ್ದಾರೆ. ಇಲ್ಲಿಯ ಇಂಡಿಯನ್ನರ 50 ಕ್ಕೂ ಹೆಚ್ಚು ಪಂಗಡಗಳಿದ್ದು ನಾಲ್ಕು ಇಂಡಿಯನ್ ಭಾಷೆಗಳನ್ನು ಮಾತನಾಡುತ್ತಾರೆ. ಇಲ್ಲಿಯ ಪ್ರಮುಖ ಧಾರ್ಮಿಕ ಪಂಗಡಗಳು ರೋಮನ್ ಕ್ಯಾಥೋಲಿಕ್ ಯುನೈಟೆಡ್ ಚರ್ಚ್ ಆಫ್ ಕೆನಡ ಹಾಗೂ ಆ್ಯಂಗ್ಲಿಕನ್ ಚರ್ಚ್ ಆಫ್ ಕೆನಡ. ಇವಲ್ಲದೆ ಯಹೂದಿಗಳು, ಗ್ರೀಕ್ ಸಂಪ್ರದಾಯವಾದಿಗಳು. ಉಕ್ರೇಯನ್ ಕ್ಯಾಥೋಲಿಕ್ಕರು ಸಹ ಇದ್ದಾರೆ.

ಇಂಡಿಯನ್ನರು ತಮ್ಮ ಕಾಯ್ದಿಟ್ಟ ಪ್ರದೇಶಗಳಿಂದ ನಗರಗಳಿಗೆ, ಪ್ರಮುಖವಾದ ವಿನ್‍ಪೆಗ್‍ಗೆ ಬಹುಸಂಖ್ಯೆಯಲ್ಲಿ ವಲಸೆ ಬರುತ್ತಿರುವುದರಿಂದ ಪ್ರಾಂತ್ಯ ಸರ್ಕಾರಕ್ಕೆ ಸಮಸ್ಯೆಯಾಗಿದೆ. ನಗರಗಳಲ್ಲಿ ಇವರಿಗೆ ಉದ್ಯೋಗ ಸಿಗದೆ ಕೊಳೆಗೇರಿಗಳಲ್ಲಿ ವಾಸಮಾಡಬೇಕಾಗಿದೆ. ಫೆಡರಲ್ ಸರ್ಕಾರ ಪ್ರಾಂತೀಯ ಸರ್ಕಾರ ಹಾಗೂ ನಗರ ಆಡಳಿತಾಂಗಗಳು ಈ ಸಮಸ್ಯೆಯನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದರೂ ಫಲಪ್ರದವಾಗಿಲ್ಲ

ಆರ್ಥಿಕತೆ : ಮ್ಯಾನಿಟೋಬದ ದಕ್ಷಿಣ ಭಾಗದ ಭೂಮಿ ಫಲವತ್ತಾಗಿದ್ದು ಕೃಷಿ ಪ್ರಮುಖ ಉದ್ಯಮವಾಗಿದೆ. ಗೋದಿ ಇಲ್ಲಿಯ ಮುಖ್ಯ ಬೆಳೆ. ಇತರ ಬೆಳೆಗಳು ಓಟ್ಸ್, ಬಾರ್ಲಿ, ರೈ, ಫ್ಲಾಕ್ಸ್, ರೇಪ್‍ಸೀಡ್, ಸೂರ್ಯಕಾಂತಿಬೀಜ, ಷುಗರ್‍ಬೀಟ್ ಹಾಗೂ ತರಕಾರಿಗಳು. ಕೆನಡಿಯನ್ ಶೀಲ್ಡ್ ಏರಿಯಾಕ್ಕೆ ಸೇರಿದ ಪ್ರದೇಶದಲ್ಲಿ ಶೇಕಡಾ 80 ಕ್ಕೂ ಹೆಚ್ಚು ಖನಿಜಸಂಪತ್ತಿದೆ. ಇಲ್ಲಿ ದೊರೆಯುವ ಖನಿಜಗಳು ನಿಕ್ಕಲ್, ಸತು, ತಾಮ್ರ, ಸಣ್ಣ ಪ್ರಮಾಣದಲ್ಲಿ ಚಿನ್ನ ಮತ್ತು ಬೆಳ್ಳಿ. ಮ್ಯಾನಿಟೋಬದಲ್ಲಿಯ ಸೀಸಿಯಮ್ ಅದುರಿನ ನಿಕ್ಷೇಪ ಪ್ರಪಂಚದಲ್ಲೇ ಅತಿದೊಡ್ಡದು. ಇಲ್ಲಿಯ ಅರಣ್ಯಗಳು ಅರ್ಧಕ್ಕಿಂತ ಹೆಚ್ಚು ಭಾಗ ವಾಣಿಜ್ಯ ದೃಷ್ಟಿಯಿಂದ ಉಪಯುಕ್ತವಾದುವು. 

ಕೈಗಾರಿಕೆಗಳಲ್ಲಿ ಮುಖ್ಯವಾದವು ಆಹಾರ ಹಾಗೂ ಪಾನೀಯಗಳ ತಯಾರಿಕೆ, ಬಟ್ಟೆಮ ಲೋಹದ ವಸ್ತುಗಳು, ರಾಸಾಯನಿಕ ವಸ್ತುಗಳು, ರಾಕೆಟ್ಟುಗಳು, ಸಾರಿಗೆ ಉಪಕರಣಗಳು, ವ್ಯವಸಾಯದ ಉಪಕರಣಗಳು ಹಾಗೂ ಸಿಮೆಂಟ್ ಇತ್ಯಾದಿ. ಪಿನಾವಾದಲ್ಲಿ ಅಣುಶಕ್ತಿ ಸಂಶೋಧನಾ ಕೇಂದ್ರ, ದಿ ಪಾಸ್‍ನಲ್ಲಿ ಸಮಗ್ರ ಅರಣ್ಯೋತ್ಪನ್ನಗಳ ಸಂಕೀರ್ಣ, ಥಾಂಪ್‍ಸನ್‍ನಲ್ಲಿ ನಿಕ್ಕಲ್ ಸಂಕೀರ್ಣ, ಪೈನ್ ಫಾಲ್ಸ್‍ನಲ್ಲಿ ಪಲ್ಟ್ ತಯಾರಿಸುವ ಕಾರ್ಖಾನೆ ಹಾಗೂ ಬ್ರಾನ್‍ಡನ್‍ನಲ್ಲಿ ಗೊಬ್ಬರ ಕಾರ್ಖಾನೆ ಇಲ್ಲಿನ ಪ್ರಮುಖ ಕೈಗಾರಿಕೆಗಳು. ನೆಲ್ಸನ್ ಹಾಗೂ ಸಸ್ಕಾಚ್‍ವಾನ್ ನದಿಗಳಲ್ಲಿ ದೊಡ್ಡ ವಿದ್ಯುದುತ್ಪಾದನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಕೆನಡ ಪೂರ್ವ ಹಾಗೂ ಪಶ್ಚಿಮ ಭಾಗಗಳ ನಡುವಿನ ಆಯಕಟ್ಟಿನ ಸ್ಥಾನದಲ್ಲಿರುವುದರಿಂದ ಮ್ಯಾನಿಟೋಬ ಪ್ರಮುಖ ಸಾರಿಗೆ ಕೇಂದ್ರವಾಗಿದೆ. ಟ್ರಾನ್ಸ್-ಕೆನಡ ಹೆದ್ದಾರಿ ಹಾಗೂ ಮುಖ್ಯ ರೈಲ್ವೆ ಮಾರ್ಗಗಳು ವಿನ್‍ಪೆಗ್ ಮೂಲಕ ಹಾದು ಹೋಗುತ್ತವೆ. ಇಲ್ಲಿಂದ ಕೆನಡ, ಯುರೋಪ್ ಹಾಗೂ ಅಮೆರಿಕದ ಎಲ್ಲ ಭಾಗಗಳಿಗೆ ವಿಮಾನ ಸೌಕರ್ಯವಿದೆ. ಹಡ್ಸನ್ ಕೊಲ್ಲಿಯ ಮೇಲಿನ ಚರ್ಚಿಲ್ ನಿಂದ ಯುರೋಪಿಗೆ ನೇರ ಸಮುದ್ರ ಮಾರ್ಗವಿದ್ದು ಇದು ಬೇಸಗೆಯ ಕೊನೆಯಲ್ಲಿ ಹತ್ತು ವಾರಗಳ ತನಕ ಲಭ್ಯವಿರುತ್ತದೆ. ವಿನ್‍ಪೆಗ್ ಸರೋವರದ ಮೂಲಕ ಸಹ ಜಲಯಾನದ ಸೌಕರ್ಯವಿದೆ.
ಆಡಳಿತ : ಕೆನಡದ ರಾಜ್ಯಾಂಗ ಹಾಗೂ 1870ರ ಮ್ಯಾನಿಟೋಬ ಕಾಯಿದೆಗೆ ಅನುಗುಣವಾಗಿ ಇಲ್ಲಿ ಆಡಳಿತ ನಡೆಯುತ್ತದೆ. ಅಧಿಕಾರವನ್ನು ಒಟ್ಟಾವಾದ ಫೆಡರಲ್ ಸರ್ಕಾರ ಹಾಗು ವಿನ್‍ಪೆಗ್‍ನ ಪ್ರಾಂತೀಯ ಸರ್ಕಾರಗಳ ನಡುವೆ ಹಂಚಲಾಗಿದೆ. ಮ್ಯಾನಿಟೋಬದ ಲೆಫ್ಟಿನೆಂಟ್ ಗವರ್ನರನನ್ನು ಕೆನಡದ ಗವರ್ನರ್ ಜನರಲ್ ನೇಮಿಸುತ್ತಾನೆ. ಸರ್ಕಾರದ ಆಡಳಿತ ಪ್ರಧಾನಿಯ ಅಧೀನದಲ್ಲಿ ನಡೆಯುತ್ತದೆ. ಇಲ್ಲಿ 5 ವರ್ಷಗಳ ಅವಧಿಯ ಶಾಸನಸಭೆಯಿದೆ. ಸ್ಥಳೀಯ ಆಡಳಿತ ಪ್ರಾಂತೀಯ ಸರ್ಕಾರದ ಅಧೀನದಲ್ಲಿದ್ದು ಪ್ರತಿಯೊಂದು ಪುರಸಭೆಗೂ ಮೇಯರ್ ಅಥವಾ ಅಧ್ಯಕ್ಷ ಪ್ರಮುಖನಾಗಿರುವ ಕೌನ್ಸಿಲ್ ಇರುತ್ತದೆ. ಡಿಸ್ಟ್ರಿಕ್ಟ್‍ಗಳನ್ನು ಪ್ರಾಂತೀಯ ಆಡಳಿತಾಧಿಕಾರಿಗಳು ನೋಡಿಕೊಳ್ಳುತ್ತಾರೆ. ಇಲ್ಲಿ ಕೌಂಟಿಗಳಿಲ್ಲ.

	ಸಾಂಸ್ಕøತಿಕ ಜೀವನ : ಮ್ಯಾನಿಟೋಬದ ಮಿಶ್ರ ಜನಾಂಗದ ಜೀವನ ವೈವಿಧ್ಯದಿಂದ ಕೂಡಿದೆ. ಇಲ್ಲಿಯ ಯುರೋಪಿಯನ್, ಏಷ್ಯನ್, ಇಂಡಿಯನ್ ಹಾಗೂ ಎಸ್ಕಿಮೋ ಪಂಗಡಗಳು ತಮ್ಮ ಸಾಂಪ್ರದಾಯಿಕ ಪ್ರತ್ಯೇಕತೆಯನ್ನು ಪದ್ಧತಿಗಳು, ನೃತ್ಯ, ಕಲೆ ಸಂಗೀತ, ಭಾಷೆ ಹಾಗೂ ಕುಶಲಕಲೆಗಳ ಮೂಲಕ ಉಳಿಸಿಕೊಂಡಿವೆ. ಇಲ್ಲಿಯ ರಾಯಲ್ ವಿನ್‍ಪೆಗ್ ಬ್ಯಾಲೆ ಜಗತ್ಪ್ರಸಿದ್ಧ. ಇತರ ಕಲಾಕೇಂದ್ರಗಳು ವಿನ್‍ಪೆಗ್ ಸಿಂಪೊನಿ ಆರ್ಕೆಸ್ರ್ಟಾ, ಮ್ಯಾನಿಟೋಬ ಥಿಯೇಟರ್ ಸೆಂಟರ್ ಹಾಗೂ ವಿನ್‍ಪೆಗ್ ಆರ್ಟ್ ಗ್ಯಾಲರಿ. ಇತರ ಸಾಂಸ್ಕøತಿಕ ಚಟುವಟಿಕೆಗಳೆಂದರೆ ದಿ ಪಾಸ್‍ನ ಟ್ರಾಪರ್ಸ್ ಹಬ್ಬ, ಫ್ಲಿನ್ ಫ್ಲಾನ್‍ನ ಟ್ರೌಟ್ ಹಬ್ಬ, ಗಿಮ್ಲಿಯ ವಾರ್ಷಿಕ ಐಸ್‍ಲ್ಯಾಂಡಿಕ್ ಆಚರಣೆ ಇತ್ಯಾದಿ.

	ಇತಿಹಾಸ : ದಕ್ಷಿಣ ಮ್ಯಾನಿಟೋಬದಲ್ಲಿ ಬ್ಲ್ಯಾಕ್‍ಫೂಟ್. ಸಾರ್ಸೀ, ಅಸಿನಬಾಯ್ನ್ ಮತ್ತು ಓಜಿಬ್ಬ ಇಂಡಿಯನ್ನರು ವಾಸವಾಗಿದ್ದರು. ಉತ್ತರಕ್ಕೆ ಅಸಿನಬಾಯ್ನ್ ಮತ್ತು ಓಜಿಬ್ಬ ಇಂಡಿಯನ್ನರು ವಾಸವಾಗಿದ್ದರು. ಉತ್ತರಕ್ಕೆ ಎಸ್ಕಿಮೋಗಳು ಹಡ್ಸನ್ ಕೊಲ್ಲಿಯ ದಡಗಳಲ್ಲಿ ವಾಸಿಸುತ್ತಿದ್ದರು. ನೆಲ್ಸನ್ ನದಿಯ ಮೂಲಕ ಈ ಪ್ರದೇಶವನ್ನು 1612ರಲ್ಲಿ ಪ್ರವೇಶಿಸಿದ ಮೊದಲನೆಯ ಯುರೋಪಿಯನ್ನನೆಂದರೆ ಸರ್ ಥಾಮಸ್ ಬಟನ್. ಏಳು ವರ್ಷಗಳ ಅನಂತರ ಎರಡು ಡೇನಿಷ್ ಹಡಗುಗಳು ಚರ್ಚಿಲ್ ನದೀಮುಖದಲ್ಲಿ ಲಂಗರು ಹಾಕಿದುವು. 1670 ರಲ್ಲಿ ಸ್ಥಾಪಿತವಾದ ಹಡ್ಸನ್ ಬೇ ಕಂಪೆನಿ ಈ ಪ್ರದೇಶದಲ್ಲಿ ಕೋಟೆಗಳನ್ನು ಕಟ್ಟಲು ಪ್ರಾರಂಭಿಸಿತು. ಇವುಗಳಲ್ಲಿ ಮುಖ್ಯವಾದದ್ದು ನೆಲ್ಸನ್ ನದೀಮುಖದಲ್ಲಿಯ ಯಾರ್ಕ್ ಫ್ಯಾಕ್ಟರಿ. ಇಲ್ಲಿಂದ 1691-92 ರಲ್ಲಿ ಹೆನ್ರಿ ಕೆಲ್ಸೆ, ಸಸ್ಕಾಚ್‍ವಾನ್ ನದಿಯ ದಿಕ್ಕಿನಲ್ಲಿ ಈ ಪ್ರಾಂತ್ಯದ ಪ್ರದೇಶಗಳನ್ನು ಪರಿಶೋಧಿಸಿದ. ಚರ್ಚಿಲ್ ನದೀ ಮುಖದಲ್ಲಿ ಪೋರ್ಟ್ ಪ್ರಿನ್ಸ್ ಆಫ್ ವೇಲ್ಸ್ ಎಂಬ ಮರದ ಕೋಟೆಯನ್ನು 1717ರಲ್ಲಿ ಕಟ್ಟಲಾಯಿತು. ಪುನಃ ಇದನ್ನು ಕಲ್ಲಿನಲ್ಲಿ 1731-76 ರಲ್ಲಿ ಕಟ್ಟಲಾಯಿತು

	ಮ್ಯಾನಿಟೋಬ 18ನೆಯ ಶತಮಾನವಿಡೀ ಇಂಗ್ಲಿಷ್ ಹಾಗೂ ಫ್ರೆಂಚರ ನಡುವಣ ಕಾದಾಟದ ಕೇಂದ್ರವಾಗಿತ್ತು. ಹಡಗುಗಳು ಹಾಗೂ ರೈಲು ಮಾರ್ಗಗಳು ಅಮೆರಿಕ ದೊಡನೆ 1867ರಲ್ಲಿ ಸಂಬಂಧ ಕಲ್ಪಿಸಿದುವು. ಇದರಿಂದ ಪೂರ್ವಕೆನಡ, ಬ್ರಿಟನ್ ಹಾಗು ಯುರೋಪ್‍ಗಳಿಂದ ದಕ್ಷಿಣಭಾಗದ ಮೂಲಕ ಇಲ್ಲಿಗೆ ಜನ ವಲಸೆ ಬರಲು ಪ್ರಾರಂಭಿಸಿದರು. ಹಡ್ಸನ್ ಬೇ ಕಂಪೆನಿಯಿಂದ ಹೊಸದಾಗಿ ಪ್ರಾರಂಭವಾದ ಕೆನಡದಡೊಮಿನಿಯನ್ ಸರ್ಕಾರ, ಈ ಪ್ರದೇಶವನ್ನು 1869 ರಲ್ಲಿ ಪಡೆದು ಕೊಂಡಿತು. 1870 ರಲ್ಲಿ ಮ್ಯಾನಿಟೋಬ ಪ್ರಾಂತ್ಯ ನಿರ್ಮಾಣವಾಗಿ, ಕೆನಡಿಯನ್ ಒಕ್ಕೂಟದಲ್ಲಿ ಸೇರಿತು. 1870 ರ ಅನಂತರ ಪೋರ್ಟ್ ಗ್ಯಾರಿಯ ಸುತ್ತಲೂ ವಿನ್‍ಪೆಗ್ ಪಟ್ಟಣ ಬೆಳೆಯಿತು. 1878 ರಲ್ಲಿ ಅಮೆರಿಕದೊಡನೆ ಹಾಗೂ 1881 ರಲ್ಲಿ ಪೂರ್ವಕೆನಡದೊಡನೆ ರೈಲುಸಂಪರ್ಕ ಕಲ್ಪಿಸಲಾಯಿತು. ಚರ್ಚಿಲ್ ಬಂದರಿನ ವರೆಗೆ 1929 ರಲ್ಲಿ ರೈಲುಮಾರ್ಗ ನಿರ್ಮಾಣವಾಯಿತು. ಮ್ಯಾನಿಟೋಬದ ಜನಸಂಖ್ಯೆ 1871 ರಲ್ಲಿ 25,000 ಇದ್ದದ್ದು 1901 ರ ವೇಳೆಗೆ 2,50,000 ಆಗಿ 1931 ರ ವೇಳೆಗೆ 7,00,000 ಆಯಿತು. ಪ್ರಾಂತ್ಯದ ಗಡಿಗಳನ್ನು 1881 ಹಾಗೂ 1912 ರಲ್ಲಿ ವಿಸ್ತರಿಸಲಾಯಿತು.									  		
 (ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ